ಮಧ್ಯಜೀವಯುಗ -
	ಭೂವಿಜ್ಞಾನದಲ್ಲಿ ಸುಮಾರು 70-220 ದಶಲಕ್ಷ ವರ್ಷತನಕ ಪ್ರಾಚೀನಕಾಲ (ಮೀಸೊಜೋಯಿಕ್ ಈರಾ). ಇದು ಪ್ರಾಗ್ಜೀವ ಯುಗ (ಪೇಲಿಯೊಜೊóೀಯಿಕ್ ಈರಾ) ಮತ್ತು ಆಧುನಿಕ ಜೀವಯುಗಗಳ (ಸೀನೊಜೊóೀಯಿಕ್ ಈರಾ) ನಡುವಿನ ಅವಧಿ. ಮಧ್ಯಜೀವಕಲ್ಪ ಪ್ರಾಗ್ಜೀವ ಯುಗದ ಅಂತ್ಯದಲ್ಲಿ ನಡೆದ ಮಹಾಪ್ರಳಯದ ಅನಂತರ ಪ್ರಾರಂಭವಾಗಿ ಆಧುನಿಕ ಜೀವಯುಗದ ಪ್ರಾರಂಭಕ್ಕೆ ಮುಂಚೆ ನಡೆದ ಮತ್ತೊಂದು ಮಹಾಪ್ರಳಯದ ಪ್ರಾರಂಭಕಾಲಕ್ಕೆ ಕೊನೆಗೊಳ್ಳುತ್ತದೆ. ಈ ಎರಡು ಮಹಾಪ್ರಳಯಗಳ ಮಧ್ಯದ ಕಾಲವನ್ನು ಟ್ರಯಾಸಿಕ್, ಜ್ಯುರಾಸಿಕ್ ಮತ್ತು ಕ್ರಿಟೇಷಸ್ ಎಂದು ಮೂರು ಭಾಗಗಳಾಗಿ ವಿಭಜಸಿದೆ. ಆಯಾ ಕಾಲಗಳಲ್ಲಿ ಸಂಚಯನಗೊಂಡ ಶಿಲಾಸ್ತೋಮಗಳಿಗೆ ಅನುಕ್ರಮವಾಗಿ ಟ್ರಯಾಸಿಕ್, ಜುರಾಸಿಕ್ ಮತ್ತು ಕ್ರಿಟೇಷಸ್ ಶಿಲಾಸ್ತೋಮಗಳೆಂದು ಹೆಸರು.

	ಪ್ರಾಗ್ಜೀವಯುಗದ ಕೊನೆಯ ಕಲ್ಪ ಪರ್ಮಿಯನ್ ಮತ್ತು ಮಧ್ಯ ಜೀವಯುಗದ ಮೊದಲನೆಯ ಕಲ್ಪ ಟ್ರಯಾಸಿಕ್ ಶಿಲಾಸ್ತೋಮಗಳ ಮಧ್ಯೆ ಇರುವ ಅನನುರೂಪತೆ ಆ ಸ್ತೋಮಗಳ ಎಲ್ಲೆಡೆಯೂ ಕಾಣಸಿಗುವುದಿಲ್ಲ. ಭಾರತದ ಸ್ಪಿಟಿ ಪ್ರದೇಶದಲ್ಲಿ ಪರ್ಮಿಯನ್ ಸ್ತೋಮದ ಅತ್ಯಂತ ಮೇಲ್ಪದರದ ಮೇಲೆ, ಟ್ರಯಾಸಿಕ್ ಸ್ತೋಮದ ಅತ್ಯಂತ ಕೆಳಪದರ ಒಟೊಸೆರಾಸ್ ಪದರ ಅನುರೂಪತೆಯಿಂದ ಸಂಚಯನಗೊಂಡಿದೆ. ಪಾಕಿಸ್ತಾನದ ಸಾಲ್ಪ್‍ರೇಂಜ್ ಪ್ರದೇಶದಲ್ಲಿ ಪರ್ಮಿಯನ್ ಶಿಲಾಸ್ತೋಮದ ಅತ್ಯಂತ ಮೇಲಿರುವ ಚಿದ್ರು ಶಿಲಾಪಾದದ ಮೇಲೆ ಟ್ರಯಾಸಿಕ್ ಶಿಲಾಸ್ತೋಮದ ಸೆರಟೈಟಿಸ್ ಪದರಗಳು ಅನುರೂಪತೆಯಿಂದ ನಿಕ್ಷೇಪಗೊಂಡಿವೆ. ಹೀಗಿದ್ದರೂ ಪ್ರಾಗ್ಜೀವಯುಗ ಮತ್ತು ಮಧ್ಯ ಜೀವಯುಗದ ಶಿಲಾಸ್ತೋಮಗಳನ್ನು ಒಟ್ಟಾರೆ ಅವಲೋಕಿಸಿದರೆ ಕೆಲವೊಂದು ಭಿನ್ನತೆಗಳನ್ನು ಕಾಣಬಹುದು.

	ಮೊದಲನೆಯ ಶಿಲಾಸ್ತೋಮಗಳಲ್ಲಿ ಸಾಮಾನ್ಯವಾಗಿ ಸುಣ್ಣಶಿಲೆ ಕಡಿಮೆ ಮೊತ್ತದಲ್ಲಿ ಇರುತ್ತದೆ : ಒಂದೇ ರೀತಿಯ ಶಿಲಾಸಂಚಯ ಅನೇಕ ಮೀಟರುಗಳಷ್ಟು ಮಂದವಾಗಿರುತ್ತದೆ. ಆದರೆ ಮಧ್ಯ ಜೀವಯುಗದ ಶಿಲಾಸ್ತೋಮಗಳಲ್ಲಿ ಸುಣ್ಣಶಿಲೆ ಅಧಿಕ ಪ್ರಮಾಣದಲ್ಲಿರುವುದು ಮಾತ್ರವಲ್ಲದೆ ಶಿಲಾಸಂಚಯದ ಆಗಾಗ್ಗೆ ಬದಲಾವಣೆಗೊಂಡಿರುವುದನ್ನೂ ಕಾಣಬಹುದು. ಎರಡನೆಯದಾಗಿ ಪ್ರಾಗ್ಜೀವ ಯುಗದ ಶಿಲಾಸ್ತೋಮಗಳು, ಸಾಮಾನ್ಯವಾಗಿ ಅಲ್ಲಲ್ಲೇ ಕಲಕಲ್ಪಟ್ಟು ನಾನಾ ರೀತಿಯ ಮಡಿಕೆಗಳಾಗಿವೆ. ಮಾತ್ರವಲ್ಲ ರೂಪಾಂತರಗೊಂಡಿವೆ ಕೂಡ. ಮಧ್ಯ ಜೀವಯುಗದ ಶಿಲಾಸ್ತೋಮಗಳು ಅಷ್ಟಾಗಿ ಕಲಕಲ್ಪಟ್ಟಿರುವುದೂ ಇಲ್ಲ, ರೂಪಾಂತರಗೊಂಡಿರುವುದೂ ಇಲ್ಲ.

	ಈ ಎಲ್ಲ ಭಿನ್ನತೆಗಳಿಗಿಂತಲೂ ಆ ಶಿಲೆಗಳಲ್ಲಿರುವ ಜೀವ್ಯವಶೇಷಗಳು ತೋರುವ ಭಿನ್ನತೆ ಎದ್ದು ಕಾಣುವಂಥದು. ಪರ್ಮಿಯನ್ ಕಲ್ಪದ ಅಂತ್ಯದಲ್ಲಿ ಜೀವಿವರ್ಗಗಳಲ್ಲಿ ತೀವ್ರ ಬದಲಾವಣೆಯಾಗಿರುವುದು ಗಮನಾರ್ಹ. ಪ್ರಾಗ್ಜೀವಯುಗದಲ್ಲಿ ಹೇರಳವಾಗಿ ಪ್ರಭಾವಸ್ಥಾನಗಳಿಸಿ ಕೊಂಡಿದ್ದ ಕೆಲವು ಪ್ರಾಣಿವರ್ಗಗಳು ಇಂದು ನಾಮಾವೇಷಗೊಂಡಿವೆ. ಮತ್ತೆ ಕೆಲವು ಪ್ರಭಾವಸ್ಥಾನವನ್ನು ಕಳೆದುಕೊಂಡಿದ್ದರೂ ಹಾಗೂ ಹೀಗೂ ಉಳಿದುಕೊಂಡಿವೆ. ಆದರೆ ಆ ಕಾಲದಲ್ಲಿ ವಿರಳವಾಗಿಯೂ ಪ್ರಭಾವರಹಿತವಾಗಿಯೂ ಒಂದು ರೀತಿ ಜೀವನ ನಡೆಸುತ್ತಿದ್ದ ಕೆಲವು ಜೀವಿವರ್ಗಗಳು ಪ್ರಭಾವಸ್ಥಾನವನ್ನು ಆಕ್ರಮಿಸಿಕೊಂಡು, ಬಲು ಬೇಗ ವೃದ್ಧಿಹೊಂದಿರುವುದು ಕಂಡುಬರುತ್ತದೆ. 

	ಈ ಯುಗದಲ್ಲಿ ಟ್ರೈಲೊಬೈಟ್, ಸಿಸ್ಟಿಡ್, ಬ್ಲಾಸ್ಟಾಯ್ಡ್ ಮತ್ತು ಪೇಲಕನಾಯ್ಡ್ ಪ್ರಾಣಿವರ್ಗಗಳು ಸಂಪೂರ್ಣವಾಗಿ ವಂಶನಷ್ಟ ಹೊಂದಿದುವು. ಕ್ರೈನಾಯ್ಡ್ ಮತ್ತು ಸ್ಪಿರಿಫೆರಿಡ್‍ಗಳು ಬಲು ವಿರಳವಾಗಿ ಉಳಿದುಕೊಂಡವು. ಸ್ಪಿರಿಫೆರಿಡ್‍ಗಳು ಜ್ಯೂರಾಸಿಕ್ ಕಲ್ಪದ ಆದಿಕಾಲದಲ್ಲಿ ವಂಶನಷ್ಟ ಹೊಂದಿದುವು. ಪ್ರಾಗ್ಜೀವಯದ ಅನೇಕ ವಿಧಗಳ ಬ್ರೇಕಿಯೊಪೋಡ ಪ್ರಾಣಿಗಳು ವಂಶನಷ್ಟ ಗೊಂಡವು. ಉಳಿದವು ತೀವ್ರ ಬದಲಾವಣೆಗೆ ಒಳಗಾದವು. ಪ್ರಾಗ್ಜೀವಯುಗದ ರೂಗೋಸ ಜಾತಿಯ ಹವಳಗಳು ನಿರ್ನಾಮಗೊಂಡು ಅವುಗಳ ಜಾಗದಲ್ಲಿ ಆಧುನಿಕ ಜಾತಿಯ ಹವಳಗಳು ಉದಯಿಸಿದುವು. ಕೆಫೆಲೊಪೋಡ ಪ್ರಾಣಿಗಳಲ್ಲಿ ಪ್ರಾಗ್ಜೀವ ಯುಗದಲ್ಲಿ ಪ್ರತಿನಿಧಿಸಲ್ಪಟ್ಟಿದ್ದ ಆರ್ಥೊಸೆರಟಡ್ ಮತ್ತು ಗೋನಿಯೊಟೈಟಿಸ್ ಎಂಬ ಜಾತಿಗಳು ವಂಶನಷ್ಟಗೊಂಡು ಅವುಗಳ ಸ್ಥಾನವನ್ನು ಹೊಸದಾಗಿ ಉದಯಿಸಿದ ಸೆರಟೈಟಿಸ್ ಎಂಬ ಕೆಫೆಲೊಪಾಡ್‍ಗಳು ಆಕ್ರಮಿಸಿದುವು. ಇವು ಸಹ ಟ್ರಯಾಸಿಕ್ ಕಲ್ಪದ ಅಂತ್ಯದಲ್ಲಿ ವಂಶನಷ್ಟ ಹೊಂದಿದಂಥವೇ. ಇವುಗಳ ಸ್ಥಾನವನ್ನು ಜ್ಯುರಾಸಿಕ್ ಕ್ರಿಟೇಷಸ್ ಕಲ್ಪದ ಅಮ್ಮೊನೈಟ್ ಪ್ರಾಣಿಗಳು ಆಕ್ರಮಿಸಿಕೊಂಡವು. ಇವು ಗಾತ್ರದಲ್ಲಿ ಅತಿ ಚಿಕ್ಕವುಗಳಿಂದ ಬಂಡಿಗಾಲಿಗಳಷ್ಟರವರೆಗೆ ದೊಡ್ಡವಾಗಿದ್ದುವು. ಅಧಿಕ ಸಂಖ್ಯೆಯಲ್ಲಿ ಮಾತ್ರವಲ್ಲದೆ, ಪ್ರಪಂಚವ್ಯಾಪಕವಾಗಿಯೂ ಇದ್ದುವು. ಇವಿಲ್ಲದ ಸಾಗರ ಭಾಗ ಮಧ್ಯಜೀವಯುಗದಲ್ಲಿ ಇರಲಿಲ್ಲವೆಂದೇ ಹೇಳಲಾಗಿದೆ; ಆದ್ದರಿಂದ ಮಧ್ಯಜೀವನಯುಗವನ್ನು ಅಮ್ಮೊನೈಟ್‍ಳ ಯುಗವೆಂದೇ ಕರೆಯಲಾಗಿದೆ. 

	ಕಶೇರುಕ ಪ್ರಾಣಿಗಳಲ್ಲಿ ಸರೀಸೃಪಗಳು ಅತಿಯಾಗಿ ವೃದ್ಧಿಗೊಂಡು ಭೂಭಾಗವನ್ನೆಲ್ಲ ಆಕ್ರಮಿಸಿದುವು. ಅವು ಯಾವುದೇ ವಾತಾವರಣಕ್ಕಾದರೂ ಹೊಂದಿಕೊಂಡು ಎಲ್ಲ ಬಗೆಯ ಆಹಾರವನ್ನೂ ಬಗ್ಗಿಸಿಕೊಂಡಿದ್ದುವು. ಅವುಗಳಲ್ಲಿ ಸಸ್ಯಾಹಾರಿಗಳು, ಮಾಂಸಾಹಾರಿಗಳು ಮಾತ್ರವಲ್ಲದೆ ಕ್ರಿಮಿಕೀಟ ಭಕ್ಷಿಗಳೂ ಇದ್ದುವು. ಆ ಪೈಕಿ ಕೆಲವು ಮರದ ಮೇಲೆ ವಾಸಿಸುತ್ತ ಕ್ರಮೇಣ ಹಾರುವುದನ್ನು ಕಲಿತು ವಾಯುಮಂಡಲವನ್ನೂ ಸೇರಿದುವು. ಮತ್ತೆ ಕೆಲವು ಪುನಃ ಜಲವಾಸಿಗಳಾದವು. ಅವುಗಳ ಗಾತ್ರ ಬಲು ದೊಡ್ಡದಾಗಿತ್ತು. ಡೈನೊಸಾರಸ್ ಎಂಬ ಒಂದು ಜಾತಿಯ ಸರೀಸೃಪ ಸುಮಾರು 30 ಮೀ ಉದ್ದ ಮತ್ತು 3 ಮೀ ಎತ್ತರ ಇತ್ತು. ಇಂಥ ಪ್ರಾಣಿಗಳನ್ನು ಮಧ್ಯಜೀವಯುಗದ ಪೆಡಂಭೂತಗಳೆಂದು ಕರೆದಿದ್ದಾರೆ.

	ಈ ಯುಗದ ಸಸ್ಯವರ್ಗದಲ್ಲಿಯೂ ಅಷ್ಟೇ ಮಹತ್ತರ ಬದಲಾವಣೆ ಆಯಿತು. ಪ್ರಾಗ್ಜೀವಯುಗದಲ್ಲಿ ನಿಬಿಡವಾಗಿದ್ದ ಕೆಲಮೈಟಿಸ್, ಲೆಪಿಡೊಡೆಂಡ್ರಾನ್ ಮತ್ತು ಸಿಜಿಲೇರಿಯ ಮುಂತಾದ ಟೆರಿಡೋಫೈಟ್ ವರ್ಗದ ಸಸ್ಯಗಳು ಹಾಗೂ ಟೆರಿಡೊಸ್ಪಮ್ ಜಾತಿಯ ಸಸ್ಯಗಳು ವಂಶನಷ್ಟಗೊಂಡವು. ಇಲ್ಲವೇ ತಮ್ಮ ಪ್ರಭಾವಸ್ಥಾನದಿಂದ ಸರಿದು ಸೈಕಾಡ್ ಮತ್ತು ಕೋನಿಫೆರಸ್‍ಗಳಿಂದ ಕೂಡಿದ ಜಿಮ್ನೊಸ್ಪಮ್ ವರ್ಗದ ಸಸ್ಯಗಳಿಗೆ ಸ್ಥಾನ ಮಾಡಿಕೊಟ್ಟವು. ಈ ಹೊಸ ಸಸ್ಯವರ್ಗ ವಿಪರೀತ ವೃದ್ಧಿಗೊಂಡು ಭೂಮಿಯ ಎಲ್ಲ ಭಾಗಗಳನ್ನೂ ಆಕ್ರಮಿಸಿಕೊಂಡಿತು. ಈ ಕಾರಣದಿಂದ ಮಧ್ಯಜೀವಯುಗವನ್ನು ಜಿಮ್ನೊಸ್ಪರ್ಮ್‍ಗಳ ಕಾಲ ಎಂದು ಕರೆಯಲಾಗಿದೆ.

	ಈ ಯುಗದ ಸ್ತನಿಗಳು ಬಲು ಚಿಕ್ಕವಾಗಿದ್ದು, ತಮ್ಮ ದೀರ್ಘ ಜೀವಿತಕಾಲವನ್ನು ಅಜ್ಞಾತವಾಸದಲ್ಲಿ ಬಿಲವಾಸಿಗಳಾಗಿ ಕಳೆದುವು. ಪ್ರಾಯಶಃ ಪೆಡಂಬೂತಗಳ ಭಯದಿಂದ ಹೀಗಾಗಿರಬೇಕು. ಈ ಪ್ರಾಣಿಗಳು ಆನೆ, ಕುದುರೆ, ಒಂಟೆ, ಸಿಂಹ, ಕೊನೆಗೆ ಮಾನವನ ಪೂರ್ವಜ ಎಂಬ ಅಭಿಪ್ರಾಯವೂ ಇದೆ. ಈ ಯುಗದ ಮತ್ತೊಂದು ವಿಶೇಷ ಹಲ್ಲುಳ್ಳ, ಬಾಲಯುತವಾದ, ರೆಕ್ಕೆ ಕೊಕ್ಕುಗಳಿಂದ ಕೂಡಿ, ಹಾರುವ ಸಾಮಥ್ರ್ಯ ಇದ್ದ ಆರ್ಕಿಯಾಪ್ಪೆರಿಕ್ ಎಂಬ ಜಾತಿಯ ವಿಚಿತ್ರ ಪಕ್ಷಿ. ಇದು ಪೆಡಂಭೂತಗಳ ಕೆಲವು ಲಕ್ಷಣಗಳನ್ನು ಹೊಂದಿದ್ದುದರಿಂದ, ಪಕ್ಷಿಗಳು ಪೆಡಂಭೂತಗಳಿಂದ ಉದ್ಭವಿಸಿದ್ದು ಎಂಬ ಅಭಿಪ್ರಾಯಕ್ಕೆ ಆಸ್ಪದವಾಗಿದೆ. ಮಧ್ಯಜೀವಯುಗದ ಕ್ರಿಟೇಷಸ್ ಕಲ್ಪದಲ್ಲಿ ಸಾಗರದಲ್ಲಿ ನೀರು ಬಲು ಸ್ವಚ್ಛವಾಗಿದ್ದ ಕಾರಣ ಪೊರಮೊನಿಫೆರ ಮುಂತಾದ ಅತಿಸೂಕ್ಷ್ಮ ಪ್ರಾಣಿಗಳ ಅವಶೇಷಗಳಿಂದ ಒಂದು ಜಾತಿಯ ಸುಣ್ಣ ಅಧಿಕ ಪ್ರಮಾಣದಲ್ಲಿ ನಿರ್ಮಾಣಗೊಂಡಿತು. ಮಧ್ಯ ಜೀವಯುಗದಲ್ಲಿ ಬೀಜಬಿಡುವ ಅದರೆ ಹೂ ಬಿಡದ (ಹೂಬಿಡುವ ಸಸ್ಯಗಳು ಈ ಯುಗದ ಕೊನೆಯಲ್ಲಿ ಉದಯಿಸಿದುವು) ಗಿಡಮರಗಳೂ ಇದ್ದುವು.

	ಈ ಯುಗದಲ್ಲಿ ಭೂಇತಿಹಾಸದ ಅತಿ ಪ್ರಾಚೀನ ಕಾಲದಿಂದಲೂ ಇದ್ದ ಗೊಂಡ್ವಾನ ಎಂಬ ಭೂರಾಶಿ ಆಫ್ರಿಕ, ಆಸ್ಟ್ರೇಲಿಯ, ದಕ್ಷಿಣ ಇಂಡಿಯಾ, ದಕ್ಷಿಣ ಅಮೆರಿಕಾ ಮತ್ತು ಅಂಟಾರ್ಕ್‍ಟಿಕ ಎಂಬ ಐದು ಭಾಗಗಳಾಗಿ ಒಡೆದು ಬೇರ್ಪಟ್ಟಿತು. ಹೀಗೆ ಬೇರ್ಪಟ್ಟ ಜಾಗಗಳಲ್ಲಿ ಅಗಾಧ ಪ್ರಮಾಣದ, ಅದರಲ್ಲೂ ಇಂಡಿಯಾದಲ್ಲಿ ಅತ್ಯಗಾಧ ಪ್ರಮಾಣದ ಶಿಲಾರಸ ಹೊರಹೊಮ್ಮಿತು, ಬೇರ್ಪಟ್ಟ ಖಂಡ ಭಾಗಗಳು ಅನುಕ್ರಮವಾಗಿ ಪೂರ್ವ, ಉತ್ತರ, ಪಶ್ಚಿಮ ಮತ್ತು ದಕ್ಷಿಣಾಭಿಮುಖವಾಗಿ ಸರಿಯತೊಡಗಿದುವು. ಇದಕ್ಕೆ ಖಂಡಗಳ ಅಲೆತ (ನೋಡಿ- ಖಂಡಗಳ-ಅಲೆತ) ಎಂದು ಹೆಸರು. ಈ ಚಲನೆಯ ಪರಿಣಾಮವಾಗಿ ಆಲ್ಪ್ಸ್, ಹಿಮಾಲಯ, ರಾಕೀಸ್ ಮತ್ತು ಆಂಡೀಸ್ ಪರ್ವತಸ್ತೋಮಗಳ ಉದಯವಾಯಿತು.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ